ಚಿಗಟೇರಿ
ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಕಸಬೆಯಿಂದ 13ಕಿಮೀ ಪೂರ್ವಕ್ಕಿರುವ ಒಂದು ಗ್ರಾಮ. ಈ ಗ್ರಾಮ ಹಿಂದೆ ಚಿನ್ನ ತೊಳೆಯುವ ಕೆಲಸಕ್ಕೆ ಪ್ರಸಿದ್ಧವಾಗಿತ್ತು. ಇಲ್ಲಿರುವ ಜಾಜಿಕಲ್ ಗುಡ್ಡ ಎಂಬ ಚಿಕ್ಕ ಬೆಟ್ಟದ ದಕ್ಷಿಣ ಮತ್ತು ಆಗ್ನೇಯದ ಪಾಶ್ರ್ವಗಳಲ್ಲಿ ಇರುವ ಚಿನ್ನದಿಂದ ಕೂಡಿದ ಬೆಣಚು ಕಲ್ಲುಗಳೇ ಇಲ್ಲಿ ದೊರೆಯುವ ಚಿನ್ನಕ್ಕೆ ಮೂಲವೆಂದು ತಿಳಿಯುತ್ತದೆ. ಅದರಂತೆ ಚಿನ್ನದಿಂದ ಕೂಡಿದ ಚೆಂಗುಳು ಎಂಬಲ್ಲಿನ ಚಿಗಟೇರಿ ಮೇಲಣ ನಾಲಾ, ಚಿಗಟೇರಿ ಹಳ್ಳಿಯ ಪಶ್ಚಿಮದಲ್ಲಿ ವಾಯವ್ಯಕ್ಕೆ ಇರುವ ಒಂದು ಚಿಕ್ಕತೊರೆ, ಬೋವಿಹಳ್ಳಿನಾಲಾ ಎಂದು ಕರೆಯುವ ಒಂದು ತೊರೆ ಮತ್ತು ಜಾಜಿಕಲ್ ಗುಡ್ಡದ ಈಶಾನ್ಯದ ಇಳಿಜಾರಿನಲ್ಲಿ ಹರಿಯುವ ಕೊಂಗನಹೊಸೂರು ನಾಲೆ ಇವುಗಳಲ್ಲಿ ಜರುಗು ಚಿನ್ನಕ್ಕಾಗಿ ಶೋಧಿಸುವುದುಂಟು. ಇವುಗಳಲ್ಲಿ ಕೊಂಗನ ಹೊಸೂರು ನಾಲೆ ಹೆಚ್ಚು ಫಲದಾಯಕ, ಉಳಿದವು ಉತ್ತಮವೆಂಬುದು ಬ್ರೂಸ್‍ಫುಟ್ ಎಂಬ ಭೂವಿe್ಞÁನಿಯ ಅಭಿಪ್ರಾಯ.    		  (ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ